ಇದು ಕಾಳಜಿಯೋ ಅಥವಾ ಅಣಕವೋ..? ಬಿಜೆಪಿಯ ಮಚ್ ಭಾತ್ ಅಭಿಯಾನಕ್ಕೆ ಬಗ್ಗೆ ಬಂಗಾಳಿಗಳು ಏನಂತಾರೆ..? | West Bengal Elections

West Bengal Elections | ಪಶ್ಚಿಮ ಬಂಗಾಳದಲ್ಲಿ ಈಗ ಬರೀ ಮೀನಿನ ಸದ್ದು
West Bengal Elections | ಪಶ್ಚಿಮ ಬಂಗಾಳದಲ್ಲಿ ಈಗ ಬರೀ ಮೀನಿನ ಸದ್ದು
Published on
West Bengal Elections: ರವೀಂದ್ರನಾಥ ಟ್ಯಾಗೋರ್ ಮತ್ತು ಸತ್ಯಜಿತ್ ರೇ ಅವರಂತಹ ದಿಗ್ಗಜರು ಉಸಿರಾಡಿದ್ದ, ಸಾಹಿತ್ಯ, ಸಂಸ್ಕೃತಿಗೆ ಹೆಸರಾಗಿದ್ದ ಪಶ್ಚಿಮ ಬಂಗಾಳದಲ್ಲಿ ಈಗ ಬರೀ ಮೀನಿನ ಸದ್ದೇ ಕೇಳುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯು ತಟ್ಟೆಯಲ್ಲಿರುವ ಮೀನಿನ ಸುತ್ತ ಸುತ್ತುತ್ತಿದ್ದು, ರಾಜಕಾರಣಿಗಳು ಮತದಾರರನ್ನು ಸೆಳೆಯಲು ಮೀನನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.
ಬಿಜೆಪಿ ಇದುವರೆಗೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲವಾದರೂ, ಕೇಂದ್ರ ಸಚಿವೆ ಸುಕಾಂತ ಮಜುಂದಾರ್ ಒಂದು ಮಹತ್ವದ ಸುಳಿವು ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮೀನು ಮತ್ತು ಮೊಟ್ಟೆಗಳನ್ನು ನಿಷೇಧಿಸಲಿದೆ ಎಂಬ ಮಮತಾ ಬ್ಯಾನರ್ಜಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ಬಂಗಾಳದ ಮುಂದಿನ ಮುಖ್ಯಮಂತ್ರಿ ಖಂಡಿತವಾಗಿಯೂ ಮಾಂಸಾಹಾರಿಯೇ ಆಗಿರುತ್ತಾರೆ. ನಾವೆಲ್ಲರೂ ಪ್ರತಿದಿನ ಮಾಂಸಾಹಾರ ಸೇವಿಸುತ್ತೇವೆ ಎಂದು ಹೇಳುವ ಮೂಲಕ ಸಸ್ಯಾಹಾರ ಹೇರಿಕೆಯ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿದ್ದಾರೆ.

ರಾಜಕಾರಣಿಗಳ ತಟ್ಟೆಯಲ್ಲಿ ಮಚ್ ಭಾತ್

ಪ್ರಧಾನಿ ನರೇಂದ್ರ ಮೋದಿ ಪುರ್ಬಾ ಮೇದಿನಿಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬಂಗಾಳವನ್ನು ಮೀನು ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಭರವಸೆ ನೀಡಿದರು. ಇದರ ಬೆನ್ನಲ್ಲೇ ಅನುರಾಗ್ ಠಾಕೂರ್ ಮತ್ತು ಮನೋಜ್ ತಿವಾರಿ ಅವರಂತಹ ನಾಯಕರು ತಾವೂ ಬಂಗಾಳಿಗಳಂತೆ ಮೀನು ಪ್ರಿಯರು ಎಂದು ಸಾಬೀತುಪಡಿಸಲು ಸಾರ್ವಜನಿಕವಾಗಿ ಮಚ್ ಭಾತ್ (ಮೀನು-ಊಟ) ಸವಿಯುತ್ತಿದ್ದಾರೆ. ವಿಶೇಷವೆಂದರೆ, ಅನೇಕ ಬಂಗಾಳಿಗಳು ಮಾಂಸಾಹಾರ ತ್ಯಜಿಸುವ ಮಂಗಳವಾರದಂದೂ ಅನುರಾಗ್ ಠಾಕೂರ್ ಮೀನು ಸೇವಿಸುವ ಮೂಲಕ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಚಾಲೆಂಜ್​...

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮಮತಾ ಬ್ಯಾನರ್ಜಿಗೆ ಬಹಿರಂಗ ಸವಾಲು ಹಾಕಿದ್ದು, ನನ್ನ ಜೊತೆ ಮೀನು ತಿನ್ನುವ ಸ್ಪರ್ಧೆಗೆ ಕುಳಿತುಕೊಳ್ಳಿ, ನಾನು ಇನ್ನೂ ಒಂದು ಕೆಜಿ ಹೆಚ್ಚು ತಿನ್ನುತ್ತೇನೆ ಎಂದಿದ್ದಾರೆ. ಇದು ಹಾಸ್ಯಸ್ಪದವಾಗಿ ಕಂಡರೂ, ಬಂಗಾಳದ ಮತದಾರರ ಆಹಾರದ ಹಕ್ಕಿನ ರಕ್ಷಣೆಯ ಭರವಸೆಯಾಗಿ ಬಿಜೆಪಿಗೆ ಗಂಭೀರ ವಿಷಯವಾಗಿದೆ.
ಬಿಜೆಪಿಯ ಈ ಮೀನು ರಾಜಕೀಯಕ್ಕೆ ಟಿಎಂಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ದೆಹಲಿಯಲ್ಲಿ ಮೀನು ಮಾರಾಟಗಾರರ ಮೇಲೆ ದಾಳಿ ಮಾಡಲಾಗುತ್ತದೆ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಶಾಲಾ ಮಕ್ಕಳ ಮಧ್ಯಾಹ್ನದ ಊಟದಿಂದ ಮೊಟ್ಟೆಯನ್ನು ತೆಗೆದುಹಾಕಲಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ವಾರಣಾಸಿಯಲ್ಲಿ ಚಿಕನ್ ಬಿರಿಯಾನಿ ಸೇವಿಸಿದ್ದಕ್ಕಾಗಿ ಜನರನ್ನು ಬಂಧಿಸಿದ ಘಟನೆಯನ್ನು ನೆನಪಿಸಿ, ಬಿಜೆಪಿಯದ್ದು ದ್ವಿಮುಖ ನೀತಿ ಎಂದು ಟೀಕಿಸಿದ್ದಾರೆ.

ಬಂಗಾಳಿಗಳು ಹೇಳುವುದೇನು..?

1. ಬಿಜೆಪಿಯ ಈ ಪ್ರಯತ್ನವು ಟಿಎಂಸಿ ಸೃಷ್ಟಿಸಿದ ಹೊರಗಿನವರು ಎಂಬ ಇಮೇಜ್ ಬದಲಿಸುವ ಹತಾಶ ತಂತ್ರದಂತೆ ಕಾಣುತ್ತಿದೆ ಎನ್ನುತ್ತಾರೆ ಆಕಾಶ್ ಚಟರ್ಜಿ
2. ಅಭಿವೃದ್ಧಿ ಮತ್ತು ಉದ್ಯೋಗದ ಬದಲು ಮೀನು ಮುಖ್ಯಾಂಶವಾಗುತ್ತಿರುವುದು ದುರದೃಷ್ಟಕರ ಸಂಗತಿ, ಬಂಗಾಳ ಎಂದರೆ ಕೇವಲ ಮೀನಲ್ಲ ಎಂದು ಪ್ರತೀಕ್ ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ.
3. ಉತ್ತರ ಭಾರತದಲ್ಲಿ ನವರಾತ್ರಿಯ ಸಮಯದಲ್ಲಿ ಮಾಂಸಾಹಾರ ನಿಷೇಧಿಸುವುದನ್ನು ನೋಡಿದರೆ, ಬಂಗಾಳದಲ್ಲಿ ದುರ್ಗಾ ಪೂಜೆಯ ವೇಳೆಯೂ ಅಂತಹ ನಿರ್ಬಂಧ ಬರಬಹುದು ಎಂಬ ಭಯ ಕಾಡುತ್ತಿದೆ ಎನ್ನುತ್ತಾರೆ ಮೌಮಿತಾ ಮುಖರ್ಜಿ.
ಒಟ್ಟಾರೆಯಾಗಿ, ಬಂಗಾಳದ ಚುನಾವಣೆಯಲ್ಲಿ ಮೀನು ಕೇವಲ ಆಹಾರವಾಗಿ ಉಳಿಯದೆ ಸಾಂಸ್ಕೃತಿಕ ಗುರುತು ಮತ್ತು ಅಸ್ತಿತ್ವದ ಹೋರಾಟವಾಗಿ ಮಾರ್ಪಟ್ಟಿದೆ. ಮತದಾರರು ಈ ಮೀನು ಪ್ರದರ್ಶನಕ್ಕೆ ಮರುಳಾಗುತ್ತಾರೆಯೇ ಅಥವಾ ನಿಜವಾದ ಸಮಸ್ಯೆಗಳನ್ನು ಗಮನಿಸುತ್ತಾರೆಯೇ ಎಂಬುದು ಮೇ 4 ರಂದು ತಿಳಿಯಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net